Category: ಕನ್ನಡ


ಪ್ರಿಯ ಮಿತ್ರರೇ,

First things first…

ಶೀರ್ಷಿಕೆ ನೋಡಿ ಕನ್ನಡ ಚಿತ್ರಗೀತೆಗಳ ಬಗ್ಗೆ ಏನಾದರು ಒಳ್ಳೆಯದ್ದನ್ನು ನಿರೀಕ್ಷಿಸುತ್ತ ಇದ್ದೀರಾದರೆ…. ನನ್ನದೊಂದು ಮಾತು…

ನಿಮ್ಮ ನಿರೀಕ್ಷೆ ಹುಸಿಯಾಗಲಿದೆ!!

ಈ ಬ್ಲಾಗಿನಲ್ಲಿ ಕನ್ನಡ ಚಿತ್ರಗೀತೆಗಳ ಬಗ್ಗೆ ಎಳ್ಳಷ್ಟೂ ಒಳ್ಳೆಯದನ್ನು ಬರೆಯಲಾಗಿಲ್ಲ…
ಘಾಸಿಯಾದ ಭಾವನೆಗಳಿಗಾಗಿ (ಚಂದನ ವಾಹಿನಿಯ ನಿರೂಪಕರ ರೀತಿಯಲ್ಲಿ…) ವಿಷಾದಿಸುತ್ತೇನೆ!!

ಭಾಗ ಒಂದನ್ನು ಪೋಸ್ಟ್ ಮಾಡಿ ಸುಮಾರು ಹದಿನೈದು ತಿಂಗಳುಗಳಾಗಿವೆ  … ಈ ಹದಿನೈದು ತಿಂಗಳುಗಳಲ್ಲಿ ನಾನು ಹಲವಾರು ಸ್ನೇಹಿತರಿಗೆ ಆ ಪೋಸ್ಟನ್ನು ತೋರಿಸಿದೆ…
ಹತ್ತರಲ್ಲಿ ಒಂಭತ್ತು ಜನರಿಗೆ ಅರ್ಥವಾಗಲಿಲ್ಲ!! (ಆ ಒಂಭತ್ತರಲ್ಲಿ ಆರು ಜನರಿಗೆ “ವಿವರಿಸಿದರೂ” ಅರ್ಥವಾಗಲಿಲ್ಲ!!)

ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪ್ರಭಾವಿತನಾಗಿ ಭಾಗ ಎರಡನ್ನು ಸೃಷ್ಟಿಸಿದ್ದೇನೆ…
ನಿಮಗೆ ಎಲ್ಲವೂ ಅರ್ಥ ಆಗಿಲ್ಲ ಅಂತ ನನಗೆ ಗೊತ್ತು…. ಅರ್ಥವಾಗದ್ದನ್ನು ಕಾಮೆಂಟಿನಲ್ಲಿ ಕೇಳಿ…. ನನಗೂ ಬೇರೆ ಕೆಲಸ ಇಲ್ಲ…

ವಿವರಿಸುತ್ತೇನೆ!

 

“ಬೀಯಾರಿಲ್ಸ್”

ಅನ್ಯ ಭಾಷಿಗರಿಗೆ ಉಚ್ಛರಿಸಲು ಸರಳವಾಗಲೆಂದು “ಬಿಳಿಗಿರಿ ರಂಗನ ಬೆಟ್ಟ”ಕ್ಕೆ ನಾವು ಕನ್ನಡಿಗರು ಇಟ್ಟಿರುವ ಹೆಸರು!! (ಅಥವಾ ಆ ಪುಣ್ಯಾತ್ಮರ ಉಚ್ಛಾರಣೆಯನ್ನು ಸಹಿಸಲಾಗದೆ ಬೀಯಾರಿಲ್ಸನ್ನು ಅವರಿಗೆ ಕಲಿಸಿ ಅದನ್ನು ನಮ್ಮ ಆಡುಭಾಷೆಯಲ್ಲಿಯೂ ಬೆರೆಸಿರುವ ಸಂಭವವೂ ಇದೆ!!)

ಇರಲಿ.

ಕಳೆದ ತಿಂಗಳು ನನ್ನ ಗೆಳೆಯ ಚೇತನ್ ಕರೆಮಾಡಿ “ಮುಂದಿನ್ ತಿಂಗ್ಳು ಬೀಯಾರಿಲ್ಸಿಗೋಗಣಾ?” ಅಂದಾಗ ನಾನು ನಂಬಲಿಲ್ಲ… (ಆರ್ ತಿಂಗಳಲ್ಲಿ ಮೂರನೆ ಸಲ ಈ ಪ್ರಶ್ನೆ ಕೇಳ್ತಾ ಇರೋದು… ಯಾವ್ ನನ್ ಮಗಂಗೆ ನಂಬಿಕೆ ಬರುತ್ತೆ?!). “ಅರೆಂಜ್ ಮಾಡ್ರಪಾ… ಬರ್ತೀನಿ” ಅಂದು ಸುಮ್ಮನಾದೆ.

ಚೇತನ್ ಸುಮ್ಮನಾಗಲಿಲ್ಲ!!

ಮುಂದಿನ ಕೆಲ ದಿನಗಳಲ್ಲಿ ವಿನೋದ ನ ಜೊತೆ ಸೇರಿಕೊಂಡು, ಅಸಂಖ್ಯ ಫೋನ್ ಕರೆಗಳನ್ನು ಮಾಡಿ, ಹಲವು ಕಡೆಗಳಲ್ಲಿ ಹಲವಾರು ಸಂಗತಿಗಳ ಬಗ್ಗೆ ವಿಚಾರಿಸಿ… ಪ್ರವಾಸದ ನೀಲನಕ್ಷೆ ತಯಾರಿಸಿ ನನಗೆ ಕರೆಮಾಡಿ ನಂಬಲಾರದಂಥ ಒಂದು ಮಾತು ಹೇಳಿದ!!

“Dude … ಮುಂದಿನ್ ಶನಿವಾರ, ಭಾನ್ವಾರ ಬೆಟ್ಟಕ್ ಹೋಗ್ತಾ ಇದೀವಿ!!”

ನಾನು ಆನೆ ಹಾರುವುದನ್ನೋ, ಮೋಬಿನ್ ಈಜುವುದನ್ನೋ, ಧೋನಿ ರನ್ ಹೊಡೆದದ್ದನ್ನೋ ನೋಡಿದವನಂತೆ ಆಶ್ಚರ್ಯ ಪಟ್ಟೆ!!

ಆದರೆ ನಾವು ಆ ಶನಿವಾರ ಆದಷ್ಟೂ ಕಡಿಮೆ ನಿದ್ರೆ ಮಾಡಿದಂಥ ನಮ್ಮ ಕಣ್ಣುಗಳನ್ನು ಬಲವಂತವಾಗಿ ತೆರೆದಿರಿಸಿಕೊಂಡು ಟ್ರಾವೆಲರ್ ಹತ್ತಿದೆವಲ್ಲ? ಆಗ ನಾನು ಸಂಪೂರ್ಣವಾಗಿ ನಂಬಿದೆ… “YES!! ನಾವು ಬಿಳಿಗಿರಿ ರಂಗನ ಬೆಟ್ಟಕ್ಕೋ, ಬೀಯಾರಿಲ್ಸಿಗೋ ಎಲ್ಲೊ ಒಂದು ಕಡೆ ಹೋಗ್ತಾ ಇದೀವಿ!!”

ಒಂದು ಕ್ರಿಕೆಟ್ ತಂಡಕ್ಕೆ ಆಗುವಷ್ಟು ಜನರನ್ನು ಹೊತ್ತ ನಮ್ಮ ಟ್ರಾವೆಲರ್ ಗಗನ ಚುಕ್ಕಿಯ ಮುಂದೆ ನಿಲ್ಲುವಷ್ಟರಲ್ಲಿ ಒಂದು ವಿಷಯ ಎಲ್ಲರಿಗೂ ಮನವರಿಕೆಯಾಯಿತು… “ನಮ್ಮಲ್ಲಿ ಯಾರೂ ತಿಂಡಿ ತಿಂದಿಲ್ಲ, ಹಾಗೂ ಎಲ್ಲರಿಗೂ ಹೊಟ್ಟೆ ಹಸಿವಾಗ್ತಿದೆ!!” (ಓ! ಒಂದಲ್ಲ ಎರಡು ವಿಷ್ಯ ಆಗಿ ಬಿಟ್ವಲ್ಲಾ..?!!)

“ಇದೊಂದ್ ನೋಡ್ಕಂಡು ಅಲ್ಲಿ ಮುಂದೆ ಎಲ್ಲಾರ ತಿನ್ನೋಣ” ಅಂತ ವಿನೋದ ಹೇಳಿದಾಗ ಅದೇ ಸರಿಯೆನ್ನಿಸಿತು..

ಗಗನಚುಕ್ಕಿ ಜಲಪಾತ

ಅಲ್ಲಿಂದ ಮುಡುಕುತೊರೆಯ ದೇವಸ್ಥಾನವನ್ನು ನೋಡಿ, ಅಲ್ಲಿ ಪ್ರಸಾದ ಸಿಗದೇ ನಿರಾಶರಾಗಿ, ವಿನೋದನಿಗೆ ಹಿಡಿ ಶಾಪ ಹಾಕುತ್ತಾ ತಲಕಾಡು ಸೇರುವಷ್ಟರಲ್ಲಿ ನಮ್ಮೆಲ್ಲರ ಹಸಿವು ಉಚ್ಛ ಸ್ಥಿತಿಗೆ ತಲುಪಿ, ತಿಂಡಿ ತಿನ್ನದೇ ದೇವಸ್ಥಾನ ನೋಡುವುದು ಅತಿದೊಡ್ಡ ತಪ್ಪೆನಿಸಿತು..!

ತಿಂಡಿ ತಿಂದು ದೇವಸ್ಥಾನ ತಲುಪುವಷ್ಟರಲ್ಲಿ ನಮ್ಮ ದಾರಿಗಡ್ಡವಾಗಿ ಬಂದ ಐದು ಗೈಡುಗಳನ್ನು ನಿಭಾಯಿಸುವ ತ್ರಾಣ ಆರನೇ ಗೈಡು ಬರುವಷ್ಟರಲ್ಲಿ ಆವಿಯಾಗಿತ್ತು!! ಹಾಗಾಗಿ ಆರನೇ ಗೈಡು ಕೇಳಿದ ನೂರು ರೂಪಾಯಿಗೆ ಒಪ್ಪಿ ಆತ ಹೇಳಿದ ಆ ಕಥೆಗಳನ್ನೂ, ಆತ ನೀಡಿದ photogrophy ಸಲಹೆಗಳನ್ನೂ ಕಿವಿಗಳಲ್ಲಿ ಸುರಿದುಕೊಂಡು, ಆತ “ಜೂಮ್ ಹಾಕಿ, ಲಾಂಗ್ ಶಾಟ್ ಇಟ್ಟು” ಕ್ಲಿಕ್ಕಿಸಿದ ಭಾವಚಿತ್ರಕ್ಕೆ ಪೋಜು ಕೊಡುತ್ತ ಅಷ್ಟೂ ದೇವಸ್ಥಾನಗಳನ್ನೂ ನೋಡಿ ಮುಗಿಸಿ ಕಾವೇರಿ ನದಿಯ ಕಡೆಗೆ ಹೊರಟೆವು…

ತಲಕಾಡು

ಕಾವೇರಿ ನದಿ

ನದಿಯಲ್ಲಿ ಸುಸ್ತಾಗುವಷ್ಟು ಈಜಿ, ಅಲ್ಲಿಂದ ಹೊರಟು ಯಳಂದೂರು ತಲುಪುವಷ್ಟರಲ್ಲಿ ಮಧ್ಯಾಹ್ನದ ಮೂರು ದಾಟಿದ್ದರಿಂದ ವಿನೋದನ ಸಲಹೆಗೆ ಕಾಯದೆ, ಮೆಡಿಕಲ್ಸಿನವ ಸೂಚಿಸಿದ “ನಾಟ್ ಗುಡ್ ನಾಟ್ ಬ್ಯಾಡ್” ಹೋಟೆಲಿಗೆ ಹೋಗಿ ಮುದ್ದೆ ಊಟ ಮಾಡಿ, ಆನಂತರ ಬಹಳ ಮುಖ್ಯ ಖರೀದಿಗೆಂದು ತಂಡಗಳಲ್ಲಿ ಬಾರುಗಳಿಗೆ ಹೊರಟೆವು. “ಖರೀದಿ” ಮುಗಿಸಿ ಟ್ರಾವೆಲರ್ ಹತ್ತಿದವರು ಮತ್ತೆ ಇಳಿದದ್ದು ಬೆಟ್ಟ ಹತ್ತುವ ಘಾಟಿಯಲ್ಲಿ ಬೆಟ್ಟಗುಡ್ಡಗಳ ನಯನಮನೋಹರ ದೃಶ್ಯ ನೋಡಲೆಂದು!! ಹಾಗೆ ಆ ಸೌಂದರ್ಯವನ್ನು ಕಣ್ಣಿಗೆ ತುಂಬಿಕೊಳ್ಳುತ್ತಿರುವಾಗ ಯಾವುದೋ ಜೀಪಿನ ಸದ್ದೂ, ಜೊತೆಗೇ “ಇಲ್ಲಿ ಇಳೀಬಾರ್ದು ಕಣ್ರೋ!!” ಎಂದು ನಮ್ಮಲ್ಲಿಯೇ ಯಾರೋ ಹೇಳಿದ ಸದ್ದೂ ಕೇಳಿಸಿ, ಅವಸರದಲ್ಲಿ ಗಾಡಿ ಹತ್ತಿಕೊಂಡು ನಾವು ಕೋಣೆಗಳನ್ನು ಕಾಯ್ದಿರಿಸಿದ್ದ ಪ್ರವಾಸಿ ಮಂದಿರ ತಲುಪಿ ಕೊಂಚ ಸುಧಾರಿಸಿಕೊಂಡೆವು..!

ರಾತ್ರಿ…………………………………..30………………………………………………………………….90………………………………………………. ………………..water………………………………………………………..pepsi………………………………………………………………………………… …………………………………………………ಊಟ ಮಾಡಿ ಮಲಗಿದೆವು.

ಮುಂಜಾನೆ ನಾವು ಎದ್ದು ನಿತ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲಿ DJ ಯ ನೇತೃತ್ವದ ಛಾಯಾಗ್ರಾಹಕರ ತಂಡ ಆಗಲೇ ತನ್ನ ಕೆಲಸದಲ್ಲಿ ತೊಡಗಿತ್ತು. ಪ್ರವಾಸಿ ಮಂದಿರದಿಂದ ಹೊರಟು “ಗಿರಿದರ್ಶಿನಿ”ಯಲ್ಲಿ ತಿಂಡಿ ತಿಂದು ಬಿಳಿಗಿರಿ ರಂಗನ ಬೆಟ್ಟದ ತುದಿ ಸೇರಿಕೊಂಡು ದೇವಸ್ಥಾನದಲ್ಲೊಂದು ಮದುವೆಗೆ ಸಾಕ್ಷಿಗಳಾಗಿ, ದೇವಾಲಯದ ಹಿಂಭಾಗದಲ್ಲಿರುವ ದೃಶ್ಯಗಳನ್ನು ನೋಡನೋಡುತ್ತ ಮೈಮರೆತೆವು (ಆದರೆ ಫೋಟೋ ತೆಗೆಸಿಕೊಳ್ಳೋದನ್ನ ಮರೀಲಿಲ್ಲ!!).

ಬಿಳಿಗಿರಿ ರಂಗನ ಬೆಟ್ಟದ ಮೇಲೆ

ದೇವಸ್ಥಾನದಿಂದ ಹೊರಟು ಸೋಲಿಗರ ಮನೆಗಳನ್ನೂ, ಶಾಲೆ, ಆಸ್ಪತ್ರೆಗಳನ್ನೂ ವೀಕ್ಷಿಸಿ, ಜೇನು ಹಾಗೂ ಉಪ್ಪಿನಕಾಯಿಗಳನ್ನು ಖರೀದಿಸಿ ಬರುವಷ್ಟರಲ್ಲಿ ಮದ್ಯಾಹ್ನವಾಗಿದ್ದರಿಂದ ಮತ್ತೆ ಗಿರಿದರ್ಶಿನಿಗೆ ಲಗ್ಗೆಯಿಟ್ಟು ಊಟ ಮಾಡಿದೆವು.

ಊಟದ ನಂತರ ಅಲ್ಲಿಯೇ ಇದ್ದ ಆಶ್ರಮವೊಂದಕ್ಕೆ ಭೇಟಿ ನೀಡಿದೆವು. ಆ ಆಶ್ರಮದಲ್ಲಿನ ಪ್ರಶಾಂತತೆಗೆ ಮಾರುಹೋದ ನನ್ನ ಧ್ವನಿವರ್ಧಕದಂತಹ ಗಂಟಲೂ ಪಿಸುಗುಡುತ್ತಿತ್ತು!! ಅಲ್ಲಿಂದ ಹೊರಟು ಕಳೆದೆರಡು ದಿನಗಳನ್ನು ಮೆಲುಕು ಹಾಕುತ್ತಾ ಕುಳಿತ ನಮ್ಮನ್ನು ಹೊತ್ತ ಟ್ರಾವೆಲರ್ ಜಿಂಕೆಗಳನ್ನೂ, ಆನೆಗಳನ್ನೂ, ವಿನೋದನ ಶಾಲೆಯನ್ನೂ ತೋರಿಸುತ್ತ ಲಘುಬಗೆಯಿಂದ ಬೆಟ್ಟವಿಳಿಯತೊಡಗಿತು.

ಆಗ ನನ್ನ ಮನಸ್ಸು ಈ ಜಾಗಗಳಲ್ಲಿ ನಾನು ಗಮನಿಸಿದ ಕೆಲ ಸಂಗತಿಗಳನ್ನು ಪಟ್ಟಿ ಮಾಡತೊಡಗಿತು….

೧. ಗಗನ ಚುಕ್ಕಿ ಜಲಪಾತ ನೋಡಲು ಗೇಟಿನಲ್ಲಿ ಗ್ರಾಮ ಪಂಚಾಯ್ತಿಯು ಸುಂಕ ವಸೂಲಿ ಮಾಡುತ್ತದೆ.

೨. ತಲಕಾಡಿನಲ್ಲಿ ಒಳ್ಳೆಯ ಹೋಟೆಲುಗಳಿಲ್ಲ… ಪರವಾಯಿಲ್ಲ ಅನ್ನಿಸುವಂತಹ ಬೇಕರಿಗಳಿವೆ! ಆದರೆ ಅಲ್ಲಿ ವಯಸ್ಕ ಭಿಕ್ಷುಕರ ಕಾಟ ಅತಿಯೆನ್ನಿಸುವಷ್ಟಿದೆ!!

೩. ಬೆಟ್ಟ ಹತ್ತುವಾಗ ಅಥವಾ ಇಳಿಯುವಾಗ ವಾಹನಗಳನ್ನು ನಿಲ್ಲಿಸುವುದು, ವಾಹನಗಳಿಂದ ಕೆಳಗಿಳಿಯುವುದು ನಿಷಿದ್ಧ. (ಪ್ರಾಣಿಗಳಿಂದ ಮನುಷ್ಯರಿಗೂ, ಮನುಷ್ಯರಿಂದ ಪ್ರಾಣಿಗಳಿಗೂ ಅಪಾಯವಾಗದಂತೆ ಮುನ್ನೆಚ್ಚರಿಕೆ)

೪. ಮುಂಚಿತವಾಗಿ ಪ್ರವಾಸಿ ಮಂದಿರದ ಕೋಣೆಗಳನ್ನು ಕಾಯ್ದಿರಿಸಿದರೆ ಉತ್ತಮ.

೫. ಏನು ಖರೀದಿಸುವುದಿದ್ದರೂ ಮುಂಚೆಯೇ ಖರೀದಿಸುವವರು ರೂಢಿಯೊಳಗುತ್ತಮರು. ಬೆಟ್ಟದಲ್ಲಿ ಒಂದು ಕೆಜಿ ಕೋಳಿಗೆ ನೂರಾ ಇಪ್ಪತ್ತು ರೂಪಾಯಿ, ಅವರೇ ಖಾದ್ಯ ತಯಾರಿಸಿ ಕೊಟ್ಟರೆ ಪ್ರತಿ ಕೆಜಿಗೆ ನೂರಾ ಐವತ್ತು ರೂಪಾಯಿಗಳನ್ನು ತೆರಬೇಕು!!

೬. ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯ ಸವಿದಷ್ಟೂ ಸೊಗಸು. ಮುಂಜಾವು ಹಾಗೂ ಮುಸ್ಸಂಜೆಗಳಂತೂ ಸ್ವರ್ಗಸಮಾನ!!

ಇವುಗಳ ಜೊತೆಯೇ ಈ ಟ್ರಿಪ್ಪಿನಲ್ಲಿ ನಾನು ತುಂಬಾ ಇಷ್ಟಪಟ್ಟ ಕೆಲ ಸಂಗತಿಗಳಿವೆ…

ಚೇತನನ ಪ್ರವಾಸ ಆಯೋಜಿಸುವ ಸಾಮರ್ಥ್ಯ, ವಿನೋದನ ಕಾಂಟ್ಯಾಕ್ಟುಗಳು, ಈಜು ಬರದಿದ್ದರೂ ಕುತ್ತಿಗೆಯವರೆಗಿರುವ ನೀರಿಗಿಳಿದ ಮೋಬಿನ್ ನ ಧೈರ್ಯ, ಮೊದಲನೇ ಭೇಟಿಯಲ್ಲಿಯೇ ಗಟ್ಟಿಯಾಗಿ ಬೆಸೆದ ವೆಂಕಿ ಮತ್ತು ಭಟ್ಟನ ಸಿಗರೆಟ್ ಸ್ನೇಹ, ಮಂಜನ ವಿಡಿಯೋ ಕಾಮೆಂಟರಿ, ಅನಾರೋಗ್ಯದಲ್ಲೂ ಬತ್ತದ ನಿಧಿಯ ಉತ್ಸಾಹ, ಬೆಳಕಿನಲ್ಲೂ ದಾರಿದೀಪವಾದ ಸುಹಾಸನ ಜೀಪೀಯೆಸ್ಸು!, ಎಂದಿಗೂ ಬತ್ತದ ಪೃಥ್ವಿಯ ಜೋಕುಗಳ ಖಜಾನೆ ಹಾಗೂ ನಿರಂತರವಾಗಿ ಉತ್ತಮಗೊಳ್ಳುತ್ತಿರುವ ಡೀಜೆಯ ಕ್ಯಾಮರಾ ಕೌಶಲ್ಯ…

ಹೇ… ಭಾಳ ಚೆನ್ನಾಗಿತ್ತು ಬಿಡ್ರಿ!!

ಹೌದು!
ಉತ್ತರ ಸಿಕ್ಕಿದೆ!!
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರನ್ನಷ್ಟೇ ಅಲ್ಲ ಇಂಗ್ಲಿಶ್ ಬಲ್ಲವರನ್ನೂ (?!) ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ…!

ವರ್ಷ : ೧೯೭೮ (1978)
ಚಿತ್ರ : ಆಪರೇಶನ್ ಡೈಮಂಡ್ ರಾಕೆಟ್
ಹಾಡು : ಇಫ್ (ಈಫ್) ಯು ಕಮ್ ಟುಡೆ..

ಹಾಡಿನ ಮೊದಲ ಕೆಲ ಸಾಲುಗಳು ಇಂತಿವೆ….
If you come today, it’s too Early (ನೀನ್ ಇವತ್ ಬಂದ್ರೆ, ಭಾಳ ಜಲ್ದಿ ಬಂದ್ಹಂಗಾತು)
If you come tomorrow, It’s too late (ನೀವು ನಾಳೆ ಬಂದರೆ, ತಡವಾಗಿ ಬಂದಂತಾಗುತ್ತದೆ)
You pick the time (ಸಮಯವನ್ನು ತಾವೇ ಆಯ್ಕೆಮಾಡುವಂಥವರಾಗಿ)
tick tick tick tick tick tick X2 (ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ X ೨)

“ಸೊ.. ಟುಡೆ ಬಂದ್ರೆ ಜಲ್ದಿ… ಟುಮಾರೋ ಬಂದ್ರೆ ಲೇಟು… ಯಾವಾಗ್ ಬಂದ್ರೆ ಕರೆಕ್ಟು…?!” ಅಂತ ಯೋಚ್ನೆ ಮಾಡ್ತಾ ಇದ್ದಂಥಾ ಎಲ್ಲರಿಗೂ ಉಪಯೋಗ ಆಗ್ಲಿ ಅಂತ ಫುಲ್ ತಲೆ ಕೆಡುಸ್ಕಂಡು ಉತ್ರ ಕಂಡ್ ಹಿಡ್ಡಿದೀನಿ… ನೋಡ್ಕಳಿ..!

ಸೊ… ಸರಿಯಾದ ಸಮಯ “ಈ ರಾತ್ರಿ”

(ಕರತಾಡನ)

ತುಂಬಾ ಧನ್ಯವಾದಗಳು ಗೆಳೆಯರೇ ಹಾಗೂ ಅವರ ಗೆಳತಿಯರೆ… ನಿಮ್ಮ ನಿರಂತರ ಪ್ರೋತ್ಸಾಹ ಹಾಗೂ ಸಹಕಾರದಿಂದ ನಾನು ಈ ಜವಾಬ್ದಾರಿಯನ್ನು ಕೈಗೆತ್ತಿಕೊಂಡು, ಅತೀ ಕ್ಲಿಷ್ಟಕರವಾದ ಪ್ರಮೇಯಗಳನ್ನು ಉಪಯೋಗಿಸಿ, ಈ ಉತ್ತರವನ್ನು ಕಂಡು ಹಿಡಿದು, ಅಜ್ನಾನದಲ್ಲಿದ್ದ (ಅಜ್ಞಾನ ಅಂದಾಗ ನೆನಪಾಯ್ತು.. ಮುಖ್ಯಮಂತ್ರಿಗಳೇ, ಕ್ಷೇಮ ತಾನೇ?) ಈ ಮನುಕುಲಕ್ಕೆ ದಾರಿದೀಪವಾಗಲು ನನಗೆ ಸಾಧ್ಯವಾಯಿತು.

ಇಷ್ಟು ಹೇಳಲು ಅವಕಾಶ ಮಾಡಿಕೊಟ್ಟ ತಮ್ಮೆಲ್ಲರಿಗೂ ವಂದಿಸುತ್ತಾ ನನ್ನ ಈ ಮಾತುಗಳನ್ನು ಮುಗಿಸುತ್ತೇನೆ. ಜೈ ಡೈಮಂಡ್ ರಾಕೆಟ್.

(ಕರತಾಡನ ಮತ್ತೊಮ್ಮೆ)

ಮುಗ್ಸೋಕಿಂತ ಮುಂಚೆ ಈ ಹಾಡನ್ನೊಂದ್ಸಲ ನೋಡಿ… ಈ ಸಾರಿ ಆ ಪ್ರಶ್ನೆ ನಿಮ್ಮ ತಲೆಗೆ ಬರೋಲ್ಲ…!!

 

 

ಹೀಗೂ ಉಂಟು..!!